ಕ್ಯಾನಿಂಗ್, ಚಾಲ್ರ್ಸ್ ಜಾನ್
1812-1862. ಬ್ರಿಟಿಷ್ ರಾಜಕಾರಣಿ. ಭಾರತದ ಗವರ್ನರ್-ಜನರಲ್ (1856-1858); ಪ್ರಥಮ ಗವರ್ನರ್-ಜನರಲ್ ಮತ್ತು ವೈಸ್‍ರಾಯ್ (1858-1862). 1812ರ ಡಿಸೆಂಬರ್ 14ರಂದು ಲಂಡನಿನಲ್ಲಿ ಜನಿಸಿದ. ತಂದೆ ಜಾರ್ಜ್ ಕ್ಯಾನಿಂಗ್. ವಿಸ್ಕೌಂಟ್ ಪದವಿಗೆ ಉತ್ತರಾಧಿಕಾರ ಇವನಿಗೆ 1837ರಲ್ಲಿ ಪ್ರಾಪ್ತವಾಯಿತು. ಕನ್ಸರ್ವೆಟಿವ್ ಪಕ್ಷದ ಅಭ್ಯರ್ಥಿಯಾಗಿ ಪಾರ್ಲಿಮೆಂಟಿಗೆ ಆಯ್ಕೆಯಾಗಿ, ರಾಬರ್ಟ್ ಪೀಲನ ಸರ್ಕಾರದಲ್ಲಿ ವಿದೇಶ ವ್ಯವಹಾರ ಖಾತೆಯ ಅಧೀನ ಕಾರ್ಯದರ್ಶಿಯಾಗಿಯೂ ಅರಣ್ಯ ಆಯುಕ್ತನಾಗಿಯೂ ಕೆಲಸ ಮಾಡಿದ. ಅನಂತರ ಲಾರ್ಡ್ ಆಬರ್ಡೀನನ ಸರ್ಕಾರದಲ್ಲಿ ಪೋಸ್ಟ್‍ಮಾಸ್ಟರ್ ಜನರಲ್ ಆಗಿ ಅಧಿಕಾರ ನಿರ್ವಹಿಸಿದ. ಲಾರ್ಡ್ ಪಾಮಸ್ರ್ಟನ್ ಬ್ರಿಟನಿನ ಪ್ರಧಾನಿಯಾಗಿದ್ದಾಗ ಕ್ಯಾನಿಂಗನಿಗೆ ಭಾರತದ ಗವರ್ನರ್-ಜನರಲ್ ಹುದ್ದೆ ಪ್ರಾಪ್ತವಾಯಿತು. ಈ ಅಧಿಕಾರವನ್ನು ಕ್ಯಾನಿಂಗ್ 1856ರ ಫೆಬ್ರವರಿಯಲ್ಲಿ ವಹಿಸಿಕೊಂಡ. ಈಸ್ಟ್ ಇಂಡಿಯ ಕಂಪನಿಯ ಆಡಳಿತಕ್ಕೊಳಪಟ್ಟಿದ್ದ ಭಾರತದಲ್ಲಿ ತೀವ್ರ ಅಶಾಂತಿ ಹಬ್ಬಿತ್ತು. ಕಂಪನಿಗಳಿಸಿದ್ದ ಸಾಮ್ರಾಜ್ಯ ಉಳಿಯಲಾರದೆಂಬ ಶಂಕೆ ಉದ್ಭವವಾಗಿತ್ತು. 1857ರ ಬಂಡಾಯ ಸಂಭವಿಸಿದ್ದು ಈತನ ಅಧಿಕಾರದ ಕಾಲದಲ್ಲೇ. 

	ಕ್ಯಾನಿಂಗನಲ್ಲಿ ಆಗ ನಾಯಕತ್ವದ ಲಕ್ಷಣಗಳೇನೂ ಪ್ರಕಾಶಕ್ಕೆ ಬಂದಿರಲಿಲ್ಲ. ಆದರೆ ತೀವ್ರ ಆಸಕ್ತಿಯಿಂದಲೂ ಪ್ರಾಮಾಣಿಕತೆಯಿಂದಲೂ ದುಡಿಯುವ ಗುಣ ಇವನಿಗಿದ್ದದ್ದರಿಂದ ಬೇಗ ಪರಿಸ್ಥಿತಿಯನ್ನೆದುರಿಸಲು ಸಮರ್ಥನಾದ. ಈತ ಗವರ್ನರ್-ಜನರಲ್ ಆಗಿ ಬಂದಾಗ ಪರ್ಷಿಯ ದೇಶ ಆಫ್ಘಾನಿಸ್ತಾನದ ಹೆರಾತನ್ನು ಆಕ್ರಮಿಸಿಕೊಂಡಿತ್ತು. ಕ್ಯಾನಿಂಗ್ ಪರ್ಷಿಯನ್ ಖಾರಿ ಪ್ರದೇಶಕ್ಕೆ ಸೈನ್ಯವನ್ನು ಕಳಿಸಿ ಪರ್ಷಿಯನ್ ಆಕ್ರಮಣವನ್ನು ತೆರವು ಮಾಡಿಸಿದ. ಇದರಿಂದ ಆಫ್ಘಾನಿಸ್ತಾನದ ಸ್ನೇಹ ಲಭ್ಯವಾಯಿತು. ಗಡಿಯೆಡೆಯಲ್ಲಿ ಸ್ವಲ್ಪ ನೆಮ್ಮದಿ ನೆಲೆಸಿತು. 1857ರಲ್ಲಿ ಮೀರತ್ತಿನಲ್ಲಿ ಬಂಡಾಯ ಆರಂಭವಾದಾಗ ಆಫ್ಘಾನಿಸ್ತಾನದ ಸ್ನೇಹಧೋರಣೆಯಿಂದ ಇವನಿಗೆ ಎಷ್ಟೋ ಪ್ರಯೋಜನವಾಯಿತು. ಚೀನದ ಮೇಲೆ ಏರಿಹೋಗಲು ಕಳಿಸಿದ್ದ ಸೇನೆಯನ್ನೂ ಈತ ಬಂಡಾಯವನ್ನೆದುರಿಸುವ ಸಲುವಾಗಿ ಹಿಂದಕ್ಕೆ ಕರೆಸಿಕೊಂಡ. ಕಳೆದುಹೋಗಿದ್ದ ದೆಹಲಿ-ಲಖನೌಗಳನ್ನು ಮತ್ತೆ ವಶಪಡಿಸಿಕೊಳ್ಳಬೇಕೆಂದೂ ಪೆಷಾವರವನ್ನು ಏನೇ ಆಗಲಿ ಬಿಟ್ಟುಕೊಡಬಾರದೆಂದೂ ಈತ ತೀರ್ಮಾನ ಮಾಡಿದ. ಬಂಡಾಯವನ್ನು ಹತ್ತಿಕ್ಕಿದ ಮೇಲೆ, ಕಂಪನಿಯಿಂದ ಬ್ರಿಟಿಷ್ ದೊರೆತನದ ವಶಕ್ಕೆ ಭಾರತದ ಆಡಳಿತ ಬಂತು. ಕ್ಯಾನಿಂಗ್ ಭಾರತದ ಗವರ್ನರ್-ಜನರಲ್ ಮತ್ತು ವೈಸರಾಯ್ ಆದ(1858). ದಂಗೆಯನ್ನು ಹತ್ತಿಕ್ಕುವುದರಲ್ಲಿ ಕ್ಯಾನಿಂಗ್ ಸ್ಥೈರ್ಯನೈಷ್ಠುರ್ಯಗಳನ್ನು ತೋರಿಸಿದ. ದೇಶೀಯ ಸಂಸ್ಥಾನಿಕರಲ್ಲೇ ಒಡಕು ಹುಟ್ಟಿಸಿ, ಅವರವರು ಬಡಿದಾಡುವ ಹಾಗೆ ಮಾಡಿದ. ಬಂಡಾಯವನ್ನು ಹತ್ತಿಕ್ಕಲು ಅವನ ಈ ನೀತಿ ಸಹಾಯಕವಾಯಿತು. ಪರ್ಷಿಯ, ಆಫ್ಘಾನಿಸ್ತಾನ ಮತ್ತು ಗುಡ್ಡಗಾಡುಗಳ ಮುಖಂಡರಲ್ಲೂ ಅವನು ಇದೇ ರೀತಿ ಕಲಹಬೀಜ ಬಿತ್ತಿ sಸಾಮ್ರಾಜ್ಯದ ಹಿಡಿತವನ್ನು ಬಲಪಡಿಸಿಕೊಂಡ.
	ಆದರೆ ಅದೇ ಕಾಲದಲ್ಲಿ ಕ್ಯಾನಿಂಗ್ ಸ್ವಲ್ಪಮಟ್ಟಿಗೆ ಔದಾರ್ಯದಿಂದಲೂ ವರ್ತಿಸಿ, ಪ್ರಜೆಗಳ ಯೋಗಕ್ಷೇಮಕ್ಕೆ ಗಮನ ನೀಡಿ, ಅವರ ಪ್ರೀತಿ ನಂಬಿಕೆ ಗಳಿಸಲು ಪ್ರಯತ್ನಪಟ್ಟ. ಭಾರತದಲ್ಲಿದ್ದ ವಿಜಯೋನ್ಮತ್ತ ಬ್ರಿಟಿಷ್ ಜನಾಂಗದವರು ಭಾರತೀಯರ ಮೇಲೆ ಸೇಡು ತೀರಿಸಿಕೊಳ್ಳುವ ಮನೋಭಾವಕ್ಕೆ ತಡೆಹಾಕಿದ್ದು ಬಂಡಾಯದ ಅನಂತರ ಈತ ಮಾಡಿದ ಮೊದಲ ಕೆಲಸ, ಬ್ರಿಟಿಷ್ ನಿವಾಸಿಗಳು ಇವನ ಕ್ಷಮಾನೀತಿಯನ್ನು ಪ್ರತಿಭಟಿಸಿದರು. ಕ್ಯಾನಿಂಗನನ್ನು ವಜಾ ಮಾಡಬೇಕೆಂದು ಕಲ್ಕತ್ತದಲ್ಲಿದ್ದ ಬ್ರಿಟಿಷ್ ಜನಾಂಗದಿಂದ ರಾಣಿಗೆ ಮನವಿ ಹೋಯಿತು. ಬ್ರಿಟಿಷ್ ಸರ್ಕಾರ ಅದನ್ನು ತಳ್ಳಿಹಾಕಿತು. ಔಧ್‍ನಲ್ಲಿ ಎಲ್ಲ ಜಮೀನನ್ನೂ 1858ರಲ್ಲಿ ಈತ ಮುಟ್ಟುಗೋಲು ಹಾಕಿಕೊಂಡು, ಜಮೀನುದಾರರ ಹಿತಗಳಿಗೆ ಅನುಕೂಲವಾಗಿರುವಂತೆ ಕಂದಾಯ ವ್ಯವಸ್ಥೆ ಏರ್ಪಡಿಸಿದ್ದಾದರೂ ಸಾಮ್ರಾಜ್ಯದ ಸ್ಥಿರೀಕರಣಕ್ಕಾಗಿಯೇ, ಜಮೀನ್ದಾರರ ಒಲವು ಗಳಿಸಿ, ಅವರು ಸಾಮ್ರಾಜ್ಯದ ರಕ್ಷಕರಾಗಿರುವಂತೆ ಮಾಡುವುದೇ ಇವನ ಉದ್ದೇಶವಾಗಿತ್ತು. ಕ್ಯಾನಿಂಗನ ಕ್ರಮಗಳಿಗೆ ಬ್ರಿಟನಿನಲ್ಲಿ ಕೂಡ ಕೆಲವರ ವಿರೋಧವಿತ್ತು. ಭಾರತ ಕಾರ್ಯದರ್ಶಿ ಲಾರ್ಡ್ ಎಲೆನ್‍ಬರೋ ಇವನ ನೀತಿಯನ್ನು ಪ್ರತಿಭಟಿಸಿದ. ಸರ್ಕಾರ ಅವನ ಪ್ರತಿಭಟನೆಗೆ ಬೆಂಬಲ ನೀಡಲಿಲ್ಲವಾಗಿ ಇವನು ರಾಜೀನಾಮೆ ನೀಡಿದ. ಸಾಮ್ರಾಜ್ಯದ ಉಳಿವಿಗಾಗಿ ಕ್ಯಾನಿಂಗ್ ಅನುಸರಿಸುತ್ತಿದ್ದ ನೀತಿಯನ್ನು ಬ್ರಿಟಿಷ್ ಸರ್ಕಾರ ಒಪ್ಪಿ ಇವನಿಗೆ ಗ್ರ್ಯಾಂಡ್‍ಕ್ರಾಸ್ ನೀಡಿ ಸನ್ಮಾನಿಸಿತು.

	ದೇಶದಲ್ಲಿ ಶಾಂತಿ ನೆಲಸಿದ ಮೇಲೆ ಆಡಳಿತ ಸುಧಾರಣೆಗೆ ಈತ ಗಮನ ನೀಡಿದ. 1861ರ ಕಾಯಿದೆಯ ಪ್ರಕಾರ ವೈಸ್‍ರಾಯಿಯ ಕಾರ್ಯನಿರ್ವಾಹಕ ಮಂಡಲಿಯ ಪುನರ್ರಚನೆಯಾಯಿತು. ಇಲಾಖಾನುಗುಣವಾಗಿ ಹೊಣೆಯ ಹಂಚಿಕೆಯಾಯಿತು. ಪ್ರಾಂತ್ಯಗಳಲ್ಲಿ ವಿಧಾನ ಪರಿಷತ್ತುಗಳ ಪುನರ್ ಸ್ಥಾಪನೆಯಾಯಿತಾದರೂ ಇಡೀ ಭಾರತಕ್ಕೆ ಅನ್ವಯಿಸುವಂತೆ ಕಾನೂನು ರಚನೆಯ ಅಧಿಕಾರ ಕೇಂದ್ರದಲ್ಲೇ ಉಳಿಯಿತು. ಭಾರತೀಯ ದಂಡಸಂಹಿತೆ ಮತ್ತು ದಂಡಪ್ರಕ್ರಿಯಾ ಸಂಹಿತೆಗಳು ಅನುಕ್ರಮವಾಗಿ 1860 ಮತ್ತು 1861ರ ಜಾರಿಗೆ ಬಂದುವು. ಹಳೆಯ ಪರಮೋಚ್ಛ ನ್ಯಾಯಾಲಯಗಳ ಮತ್ತು ಕಂಪನಿಯ ಅದಾಲತ್‍ಗಳ ಬದಲು ಕಲ್ಕತ್ತ, ಮದ್ರಾಸು ಮತ್ತು ಮುಂಬೈಗಳಲ್ಲಿ ಉಚ್ಚ ನ್ಯಾಯಾಲಗಳ ಸ್ಥಾಪನೆ ಆದ್ದು 1862ರಲ್ಲಿ ಭಾರತದ ಸೇನೆ ಐರೋಪ್ಯ ಅಧಿಕಾರಿಗಳ ನೇತೃತ್ವದಲ್ಲಿ ಪುನವ್ರ್ಯವಸ್ಥೆಗೊಂಡಿತು. ವರಮಾನ ತೆರೆಗೆಯನ್ನು ಜಾರಿಗೆ ತಂದದ್ದರಿಂದ ಸರ್ಕಾರದ ಹಣಕಾಸಿಗೆ ಸ್ಥಿರತೆ ಲಭ್ಯವಾಯಿತು. ಬಂಗಾಳ ಬಿಹಾರಗಳ ನೀಲಿ(ಇಂಡಿಗೊ) ತೋಟಗಳಲ್ಲಿಯ ದಬ್ಬಾಳಿಕೆಯಿಂದ ನರಳುತ್ತಿದ್ದ ರೈತರ ಕಷ್ಟಗಳನ್ನು ವಿಚಾರಿಸಿ ವರದಿ ಮಾಡಲು ಒಂದು ಆಯೋಗವನ್ನು ನೇಮಿಸಿದ. ಅದರ ಸಲಹೆಗಳನ್ನು ಜಾರಿಗೆ ತಂದದ್ದರಿಂದ ರೈತರ ಮೇಲಣ ದಬ್ಬಾಳಿಕೆ ಎಷ್ಟೋ ಕಡಿಮೆಯಾಯಿತು. 1861ರಲ್ಲಿ ಕ್ಷಾಮಪರಿಹಾರಕ್ಕಾಗಿ ಕೈಗೊಂಡ ಕ್ರಮಗಳೂ ಮುಖ್ಯವಾದುವು. ಈತ ಶಿಕ್ಷಣಕ್ಕೂ ಹೆಚ್ಚಿನ ಪ್ರೋತ್ಸಾಹ ನೀಡಿದ. 1857ರಲ್ಲಿ ಕಲ್ಕತ್ತ, ಬೊಂಬಾಯಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯಗಳು ಸ್ಥಾಪಿತವಾದುವು. ಖಾಸಗಿ ಕಾಲೇಜುಗಳಿಗೆ ಅನುದಾನ ನೀಡುವ ಪದ್ಧತಿ ಜಾರಿಗೆ ಬಂತು.

	ಕ್ಯಾನಿಂಗನ ಪತ್ನಿ 1861ರಲ್ಲಿ ತೀರಿಕೊಂಡಳು. ಆಕೆ ಮರಣ ಕ್ಯಾನಿಂಗನ ಮೇಲೆ ತೀವ್ರ ಪರಿಣಾಮವನ್ನುಂಟುಮಾಡಿತು. 1862ರ ಮಾರ್ಚ್‍ನಲ್ಲಿ ಆತ ಭಾರತದಿಂದ ಸ್ವದೇಶಕ್ಕೆ ಮರಳಿದ. ದುಃಖದಿಂದಲೂ ಅತಿಯಾದ ದುಡಿಮೆಯಿಂದಲೂ ಜರ್ಝರಿತನಾಗಿದ್ದ ಕ್ಯಾನಿಂಗ್ 1862ರ ಜೂನ್ 17ರಂದು ತೀರಿಕೊಂಡ. 					(ಟಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ